ಬಿಸಿಲಧಕ್ಕೆ -
ಬಿಸಿಲಿನ ಅತಿಯಾದ ತಾಪಕ್ಕೆ ಸಿಕ್ಕಿಬಿದ್ದಾಗ ಪರಿಣಮಿಸುವ ಕುಸಿತ (ಸನ್ ಸ್ಟ್ರೋಕ್). ನಿಯಂತ್ರಿಸಲಾಗದೆ ಏರುತ್ತಲೆ ಇರುವ ದೇಹೋಷ್ಣತೆ, ಚಿತ್ತೋದ್ರೇಕ ಹಾಗೂ ಅತೀವ ಬಳಲಿಕೆಗಳಿಂದ ಕೂಡಿದ ಈ ಪರಿಸ್ಥಿತಿ ಕೂಡಲೇ ಚಿಕಿತ್ಸಿಸಲ್ಪಡದಿದ್ದರೆ ಮಾರಕವೇ ಆಗಬಹುದು. ಬಿಸಿಲಧಕ್ಕೆಯೊಡನೆ ಅದೇ ಕಾಲದಲ್ಲಿ ಉಷ್ಣಧಕ್ಕೆಯೂ (ಹೀಟ್ ಸ್ಟ್ರೋಕ್) ಕಂಡುಬರುವುದು ಅಪರೂಪವಲ್ಲ. ವಾಸ್ತವವಾಗಿ ಚುರುಗುಟ್ಟುವ ಬಿಸಿಲಿನಿಂದ ಉಂಟಾದ ಉಷ್ಣಧಕ್ಕೆಯೇ ಬಿಸಿಲಧಕ್ಕೆ. 
ತಲೆ ಮತ್ತು ಕತ್ತಿನ ಹಿಂಭಾಗ ನೇರ ಬಿಸಿಲಿನಿಂದ ಕಾಯುತ್ತಿರುವಾಗಲೂ ಸಮುದ್ರ ದಂಡೆಯಲ್ಲಿ ಸ್ನಾನಾನಂತರ ಬೆನ್ನುಮೇಲಿ ಮಾಡಿ ಬಿಸಿಲು ಕಾಸುತ್ತಿರುವಾಗಲೂ ವ್ಯಕ್ತಿ ಬಿಸಿಲಧಕ್ಕೆಗೆ ಈಡಾಗುವುದಿದೆ. ಬಿಸಿಲೇ ಪ್ರಧಾನ ಕಾರಣವಾದ ಈ ಸ್ಥಿತಿ ಉಷ್ಣ ಹಾಗೂ ಸಮಶೀತೋಷ್ಣವಲಯಗಳಲ್ಲಿ ಮುಖ್ಯವಾಗಿ ಕಂಡು ಬರುತ್ತದೆ. ಬಿಸಿಲಿನ ಪ್ರಖರತೆಯಿಂದಾಗಿ ದೇಹೋಷ್ಣತೆ ಮಾಮೂಲು 37  ಬದಲು 43 ಗಿಂತಲೂ ಹೆಚ್ಚಾಗಿ ಏರುತ್ತದೆ. ಅಲ್ಲದೆ ಕುತ್ತಿಗೆಯ ಹಿಂದೆ ತಲೆಯ ಬುಡದಲ್ಲಿ ಬಿಸಿಲಿನ ಅತಿಹೆಚ್ಚು ಕಾವಿನಿಂದ ಆ ಭಾಗದಲ್ಲಿರುವ ನರಮಂಡಲ ನೇರವಾಗಿ ಉದ್ರೇಕಿಸಲ್ಪಡುತ್ತದೆ. ಈ ಕಾರಣಗಳಿಂದ ಸರಮಂಡಲಕ್ರಿಯ ಅಸ್ತವ್ಯಸ್ತವಾಗಿ ಬಿಸಿಲಧಕ್ಕೆಯಲ್ಲಿ ಪರ್ಯವಸಾನಗೊಳ್ಳುತ್ತದೆ. ಇಂಥ ವೇಳೆ ಬೆವರಿಕೆ ಸ್ಥಗಿತವಾಗಿ ದೇಹೋಷ್ಣತೆ ಇನ್ನೂ ಹೆಚ್ಚಾಗುತ್ತ ಹೋಗಿ ನರಮಂಡಲಕ್ಕೆ ತೀವ್ರ ಧಕ್ಕೆತಾಗುತ್ತದೆ. ಮಳೆಗಾಲದ ಉಬ್ಬು ಸೆಖೆಯ ವೇಳೆ ದೇಹ ಬೆವರಿದರೂ ಪರಿಸರದ ಆದ್ರ್ರತೆಯಿಂದಾಗಿ ಬೆವರು ಆವಿಯಾಗಿ ಆರಿಹೋಗಲಾರದೆ ತೊಟ್ಟಿಕ್ಕಿ ಹೋಗುವುದರಿಂದ ದೇಹೋಷúತೆಯನ್ನು ಕಡಿಮೆಯಾಗಿಸಲು ಸಾಧ್ಯವಾಗುವುದಿಲ್ಲ. ಇಂಥ ಸಮಯದಲ್ಲಿ ದೇಹೋಷ್ಣತೆ ಹೆಚ್ಚುತ್ತ ಹೋಗುವುದು ವ್ಯಕ್ತ. ಬಾಯಿಲರುಗಳು, ಫರ್ನೆಸುಗಳು. ಕುಲುಮೆಗಳು ಇತ್ಯಾದಿ ಇರುವ ಕಡೆ ಪರಿಸರದ ಅತೀವ ಉಷ್ಣತೆಯಿಂದಾಗಿ ದೇಹೋಷ್ಣತೆ ಹೆಚ್ಚುತ್ತ ಹೋಗುವುದೂ ತಿಳಿಯಬಹುದಾದದ್ದೇ. ಇಂಥ ವೇಳೆಗಳಲ್ಲಿಯೂ ಬೆವರಿಕೆ ಸ್ಥಗಿತವಾಗಿ ವ್ಯಕ್ತಿ ಉಷ್ಣಧಕ್ಕೆಗೆ ಈಡಾಗುವುದಿದೆ. 
ಯಾವುದೇ ಕಾರಣದಿಂದ ಉಷ್ಣಧಕ್ಕೆ ಪರಿಣಮಿಸಿದರೂ ಪ್ರಾರಂಭದಲ್ಲಿ ಲಘುವಾದ. ಅನಂತರ ತೀವ್ರ ತೆರೆನಾದ ತಲೆನೋವು, ವಮನ, ನಿದ್ರಾನಾಶ ಉಂಟಾಗಿ ಕ್ರಮೇಣ ಅತಿ ಹೆಚ್ಚಾದ ಜ್ವರ, ಚಿತ್ತೋದ್ರೇಕ, ಮಂಪರು ಸ್ಥಿತಿ ಕಂಡುಬಂದು ಅಂತಿಮವಾಗಿ ಮರಣ ಸಂಭವಿಸುತ್ತದೆ. ಬೆವರೇ ಇಲ್ಲದ ಶುಷ್ಕವಾದ ಸುಡುಮೈ ಇಂಥ ಧಕ್ಕೆಯ ವೈಶಿಷ್ಟ್ಯ. ಆದರೆ ಕಿಕ್ಕಿರಿದ ಜನ ಸಮೂಹದಲ್ಲಿ ಸಿಕ್ಕಿ ಕುಸಿದು ಬೀಳುವುದೂ ಉಷ್ಣ ಅಥವಾ ಬಿಸಿಲಧಕ್ಕೆಯೂ ಸಮಾನ ಪರಿಸ್ಥಿತಿಗಳಲ್ಲ, ಜನಗುಂಪಿನಲ್ಲಿ ಗಾಳಿ ಆಡದೆ ಸೆಖೆ ಉಂಟಾಗಿ ಬಳಲಿಕೆ ಆಗುತ್ತದೆ. ಅಲ್ಲದೆ ಅಂಥ ಪರಿಸರದಲ್ಲಿ ದೇಹದ ರಕ್ತನಾಳಗಳು ಹಿಗ್ಗಿ ತಾತ್ಕಾಲಿಕವಾಗಿ ದೇಹದ ರಕ್ತ ಒತ್ತಡ ಹಠತ್ತಾಗಿ ಕಡಿಮೆ ಆಗುತ್ತದೆ. ಇದೇ ಆ ಕಾಲದ ಕುಸಿತಕ್ಕೆ ಕಾರಣ. ಇಂಥ ಕುಸಿತದಲ್ಲಿ ವ್ಯಕ್ತಿಯ ದೇಹ ಬೆವರಿ ಒದ್ದೆ ಮುದ್ದೆ ಆಗಿರುತ್ತದೆ. ಆದರೆ ಬಿಸಿಲು-ಉಷ್ಣಧಕ್ಕೆಯಲ್ಲಿ ನರಮಂಡಲ ಕ್ರಿಯೆಯ ಏರುಪೇರಿನಿಂದಾಗಿ ಬೆವರಿಕೆ ಸ್ಥಗಿತವಾಗುವುದರಿಂದ ಮೈ ಶುಷ್ಕವಾಗಿಯೂ ಬಿಸಿಯಾಗಿಯೂ ಇರುವುದು ವಿಶಿಷ್ಟ ಲಕ್ಷಣ. ಕಣ್ಣುಗಳು ಕೆಂಪಡರಿ, ನಾಡಿಮಿಡಿತದ ದರ ಪ್ರಾರಂಭದಲ್ಲಿ ಹೆಚ್ಚಾಗಿದ್ದರೂ ಕ್ರಮೇಣ ಕಡಿಮೆ ಆಗುತ್ತ, ಉಸಿರಾಟ ನಿಧಾನ ಹಾಗೂ ಗೊಗ್ಗರವಾಗುತ್ತ ತೀವ್ರ ಬಳಲಿಕೆ ಆಗಿ ಕೊನೆಗೆ ಮರಣ ಸಂಭವಿಸುತ್ತದೆ. 

ಬಿಸಿಲ ಉಷ್ಣಧಕ್ಕೆಗೆ ತುರ್ತು ಚಿಕಿತ್ಸೆ ಅಗತ್ಯ ಎನ್ನುವುದು ಸ್ವಷ್ಟ. ಮಂಜುಗೆಡ್ಡೆಯ ವಿವಿಧ ರೀತಿಯ ಬಳಕೆಗಳಿಂದ ದೇಹೋಷ್ಣತೆ ಕಡಿಮೆ ಮಾಡುವುದೊಂದೇ ಯುಕ್ತ ಚಿಕಿತ್ಸಾ ಮಾರ್ಗ. ಕುಸಿದು ಬಿದ್ದಿರುವ ಸ್ಥಳದಿಂದ ಮಬ್ಬು ಬೆಳಕಿರುವ ಹಾಗೂ ತಂಪಾಗಿರುವ ಸ್ಥಳಕ್ಕೆ ವ್ಯಕ್ತಿಯನ್ನು ಒಯ್ಯಬೇಕು. ಬಟ್ಟೆ, ಶಿರಕವಚಗಳನ್ನು ತೆಗೆದು ಮೈಯ್ಯನ್ನೆಲ್ಲ ಗಾಳಿಗೆ ಒಡ್ಡಬೇಕು. ಮಂಜುಗೆಡ್ಡೆ ಸೇರಿಸಿ ತಂಪಾಗಿಸಿದ ನೀರಿನಲ್ಲಿ ಅದ್ದಿ ಹಿಂಡಿದ ಬಟ್ಟೆಯಿಂದ ಮೈ ಕೈಬೆನ್ನು ತಲೆಗಳನ್ನು ಒರೆಸಿ ಗಾಳಿ ಹಾಕಬೇಕು. ಮಂಜುಗೆಡ್ಡೆಯಿಂದ ಅತಿಯಾಗಿ ಶೀತಳವಾಗಿರಿಸಿದ ಪಾನೀಯಗಳನ್ನು ಕೊಡಬೇಕು. ಇನ್ನೂ ತೀವ್ರ ಪರಿಸ್ಥಿತಿಗಳಲ್ಲಿ ತಲೆಯನ್ನು ನುಣ್ಣಗೆ ಕ್ಷೌರಮಾಡಿ ತಲೆ ಹಾಗೂ ಕುತ್ತಿಗೆಯ ಹಿಂಭಾಗದಲ್ಲಿ ಮಂಜುಗೆಡ್ಡೆ ಇರುವ ರಬ್ಬರ್ ಚೀಲಗಳನ್ನು ಇಡಬೇಕು. ಬೆವರಿಸುವುದಕ್ಕೂ ಉಸಿರಾಟವನ್ನು ಕ್ರಮಗೊಳಿಸುವುದಕ್ಕೂ ತಕ್ಕ ಪ್ರಚೋದಕ ಔಷಧಿಗಳನ್ನು ಕೊಡಬೇಕು. 
ಇಂಥ ಕ್ರಮಗಳಿಂದ ಧಕ್ಕೆಯ ತೀವ್ರ ಪರಿಣಾಮಗಳು ನಿಂತರೂ ವ್ಯಕ್ತಿಯ ನರಮಂಡಲ ಸುಮಾರು ಒಂದು ತಿಂಗಳತನಕವೂ ದುರ್ಬಲವಾಗಿಯೇ ಇರುತ್ತದೆ. ಆದ್ದರಿಂದ ಆತ ಶೀಘ್ರದಲ್ಲಿ ಪುನ: ಬಿಸಿಲಿಗೆ ಅಥವಾ ಉಷ್ಣ ಪರಿಸರಕ್ಕೆ ಈಡಾಗದಂತೆ ಎಚ್ಚರಿಕೆ ವಹಿಸಬೇಕು. 

ತಂಪು ಪ್ರದೇಶ ನಿವಾಸಿಗಳು ಬಿಸಿಲು ಹೆಚ್ಚಾಗಿರುವ ಸ್ಥಳಕ್ಕೆ ವಲಸೆ ಹೋದ ತರುಣದಲ್ಲಿ ಅನುಭವವಿಲ್ಲದೆ ಅಥವಾ ತಿಳಿವಳಿಕೆ ಸಾಲದೆ ತಮ್ಮ ದೇಹವನ್ನು ಬಿಸಿಲಿಗೆ ಒಡ್ಡಿ ಧಕ್ಕೆಗೆ ತುತ್ತಾಗುವ ಸಂಭವ ಉಂಟು. ಇದೇ ರೀತಿ ಇವರು ಕಡು ಬೇಸಿಗೆಯಲ್ಲಿ ಮೋಡ ಕವಿದು ಉಬ್ಬು ಸೆಖೆ ಇರುವಾಗಲೂ ಅತಿಯಾಗಿ ಶ್ರಮಪಟ್ಟು ಕೆಲಸಮಾಡುತ್ತ ಉಷ್ಣಧಕ್ಕೆಗೆ ಈಡಾಗುವ ಅಪಾಯವೂ ಉಂಟು. ಈ ಪ್ರಾಂತ್ಯಗಳಲ್ಲಿಯೇ ಹುಟ್ಟಿ ಬೆಳೆದ ವ್ಯಕ್ತಿಗಳಿಗೆ ತಕ್ಕ ಎಚ್ಚರಿಕೆ ಕ್ರಮಗಳು ಅನುಭವದಿಂದ ಸಿದ್ಧಿಸಿರುವುದರಿಂದಲೂ ಅವರು ಸ್ಥಳೀಯ ಹವೆಗೆ ಒಗ್ಗಿಕೊಂಡಿರುವುದರಿಂದಲೂ ಧಕ್ಕೆಗೆ ಸಾಮಾನ್ಯವಾಗಿ ಈಡಾಗುವುದಿಲ್ಲ. ವಲಸೆಬಂದವರೂ ಕಾಲಕ್ರಮದಲ್ಲಿ ಇಂಥ ಒಗ್ಗುವಿಕೆಯನ್ನು ಸಂಪಾದಿಸುತ್ತಾರೆ. ಆದರೆ ಪ್ರಾರಂಭದಲ್ಲಿ ಅಂದರೆ ಒಗ್ಗಿಕೊಳ್ಳುವುದಕ್ಕೆ ಮುನ್ನ ಇವರಿಗೆ ತಲೆನೋವು, ತಲೆಸುತ್ತು, ತಲೆಭಾರ, ಅರೋಚಕತೆ, ಹೊಟ್ಟೆತೊಳಸು, ವಮನ, ನಿದ್ರಾನಾಶ, ಅಲ್ಪಜ್ವರ ಇಂಥ ತೊಂದರೆಗಳು ಕಂಡುಬರಬಹುದು. ತಲೆ ಮತ್ತು ಕುತ್ತಿಗೆಯ ಹಿಂಭಾಗಕ್ಕೆ ಬಿಸಿಲಿನಿಂದ ರಕ್ಷಣೆಕೊಡುವುದು, ಉಬ್ಬು ಸೆಖೆ ವೇಳೆ ಆಲಸ್ಯವಾದ ಕೂಡಲೇ ಬಟ್ಟೆ ಕಳಚಿ ತಣ್ಣೀರಿನಿಂದ ಒರೆಸಿ ಗಾಳಿ ಹಾಕಿಕೊಳ್ಳುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಇವರು ತೆಗೆದುಕೊಳ್ಳುವುದು ಒಳ್ಳೆಯದು. 	

(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ